ಪಾದಮಾನಿ ಜಯಂತನೊಳಗೆ ಸು
ಮೇಧನಾಮಕನಿಪ್ಪ ದಕ್ಷಿಣ
ಪಾದದುಂಗುಟದಲ್ಲಿ ಪವನನು ಭಾರ ಭೃದ್ರೂಪ |
ಕಾದುಕೊಂಡಿಹ ಟಂಕಿ ತರ ಮೊದ
ಲಾದ ನಾಮದಿ ಸಂಧಿಗಳಲೀ
ರೈದು ರೂಪದಲಿಪ್ಪ ಸಂತತ ನಡೆದು ನಡೆಸುತಲಿ  ||  ೧  ||

ಕಪಿಲ ಚಾರ್ವಾಂಗಾದಿರೂಪದಿ
ವಪುಗಳೊಳು ಹಸ್ತಗಳ ಸಂಧಿಯೊ
ಳಪರಿಮಿತ ಕರ್ಮಗಳ ಮಾಡುತಲಿಪ್ಪ ದಿನದಿನದಿ |
ಕೃಪಣವತ್ಸಲ ಪಾರ್ಶ್ವದೊಳು ಪರ
ಸುಫಲಿಯೆನಿಸುವ ಗುದ ಉಪಸ್ಥದಿ
ವಿಪುಲಬಲಿ ಭಗಮನವೆನಿಸಿ ತುಂದಿಯೊಳಗಿರುತಿಹನು  ||  ೨  ||

ಐದು ಮೇಲೊಂದಧಿಕ ದಳ ಉ
ಳ್ಳೈದು ಪದ್ಮವು ನಾಭಿಮೂಲದಿ
ಐದು ಮೂರ್ತಿಗಳಿಹವು ಅನಿರುದ್ಧಾದಿ ನಾಮದಲಿ |
ಐದಿಸುತ ಗರ್ಭವನು ಜೀವರ
ನಾದಿಕರ್ಮಪ್ರಕೃತಿ ಗುಣಗಳ
ಹಾದಿ ತಪ್ಪಲಿಗೊಡದೆ ವ್ಯಾಪಾರಗಳ ಮಾಡುತಿಹ  ||  ೩  ||

ನಾಭಿಯಲಿ ಷಟ್ಕೋಣ ಮಂಡಲ
ದೀ ಭವಿಷ್ಯದ್ಭ್ರಹ್ಮನೊಳು ಮು
ಕ್ತಾಭ ಶ್ರೀಪ್ರದ್ಯುಮ್ನ ನಿಪ್ಪನುವಿಬುಧಗಣ ಸೇವ್ಯ |
ಶೋಭಿಸುತ  ಕೌಸ್ತುಭವೆ ಮೊದಲಾ
ದಾಭರಣವಾಯುಧಗಳಿಂದ ಮ
ಹಾಭಯಂಕರ ಪಾಪಪುರುಷನ ಶೋಷಿಸುವ ನಿತ್ಯ  ||  ೪  ||

ದ್ವಾದಶಾರ್ಕರ ಮಂಡಲವು ಮ
ಧ್ಯೋದರದೊಳು ಸುಷುಮ್ನದೊಳಗಿಹು
ದೈದು ರೂಪಾತ್ಮಕನು ಅರವತ್ತಧಿಕ ಮುನ್ನೂರು |
ಈ ದಿವಾರಾತ್ರಿಗಳ ಮಾನಿಗ
ಳಾದ ದಿವಿಜರ ಸಂತಯಿಸುತ ನಿ
ಷಾದ ರೂಪಕ ದೈತ್ಯರನು ಸಂಹರಿಪ ನಿತ್ಯದಲಿ  ||  ೫  ||

ಹೃದಯದೊಳಗಿಹುದಷ್ಟದಳಕಮ
ಲದರೊಳಗೆ ಪ್ರಾದೇಶನಾಮಕ
ನುದಿತ ಭಾಸ್ಕರನಂತೆ ತೋರ್ಪನು ಬಿಂಬನೆಂದೆನಿಸಿ |
ಪದುಮ ಚಕ್ರ ಸುಶಂಖ ಸುಗದಾಂ
ಗದ ಕಟಕ ಮಕುಟಾಂಗುಲೀಯಕ
ಪದಕ ಕೌಸ್ತುಭಹಾರಗ್ರೈವೇಯಾದಿ ಭೂಷಿತನು  ||  ೬  ||

ದ್ವಿದಳ ಪದ್ಮವು ಶೋಭಿಪುದು ಕಂ
ಠದಲಿ ಮುಖ್ಯಪ್ರಾಣ ತನ್ನಯ
ಸುದರಿಯಿಂದೊಡಗೂಡಿ ಹಂಸೋಪಾಸನೆಯ ಮಾಳ್ಪ |
ಉದಕವನ್ನಾದಿಗಳಿಗವಕಾ
ಶದನು ತಾನಾಗಿದ್ದು ದಾನಾ
ಭಿಧನು ಶಬ್ದವ ನುಡಿದು ನುಡಿಸುವ ಸರ್ವಜೀವರೊಳು  ||  ೭  ||

ನಾಸಿಕದಿ ನಾಸತ್ಯ ದಸ್ರರು
ಶ್ವಾಸಮಾನಿ ಪ್ರಾಣ ಭಾರತಿ
ಹಂಸ ಧನ್ವಂತ್ರಿಗಳು ಅಲ್ಲಲ್ಲಿಪ್ಪರವರೊಳಗೆ |
ಭೇಶ ಭಾಸ್ಕರ ರಕ್ಷಯುಗಳಕ
ಧೀಶರೆನಿಪರು ಅವರೊಳಗೆ ಲ
ಕ್ಷ್ಮೀಶ ದಧಿ ವಾಮನರು ನೀಯಾಮಿಸುತಲಿರುತಿಹರು  ||  ೮  ||

ಸ್ತಂಭ ರೂಪದಲ್ಲಿಪ್ಪ ದಕ್ಷಿಣ
ಅಂಬಕದಿ ಪ್ರದ್ಯುಮ್ಮ ಗುಣ ರೂ
ಪಾಂಭ್ರಣಿಯು ತಾನಾನಿ ಇಪ್ಪಳು ವತ್ಸರೂಪದಲಿ |
ಪೊಂಬಸಿರ ಪದಯೋಗ್ಯ ಪವನ ತ್ರಿ
ಯಂಬಕಾದಿ ಸಮಸ್ತ ದಿವಿಜಕ
ದಂಬ ಸೇವಿತನಾಗಿ ಸರ್ವ ಪದಾರ್ಥಗಳ ತೋರ್ಪ  || ೯  ||

ನೇತ್ರಗಳಲಿ ವಸಿಷ್ಠ ವಿಶ್ವಾ
ಮಿತ್ರ ಭಾರದ್ವಾಜ ಗೌತಮ
ನತ್ರಿಯಾ ಜಮದಗ್ನಿ ನಾಮಗಳಿಂದ ಕರೆಸುತಲಿ |
ಪತ್ರತಾಪಕ ಶಕ್ರ ಸೂರ್ಯಧ
ರಿತ್ರಿ ಪರ್ಜನ್ಯಾದಿ ಸುರರು ಜ
ಗತ್ರಯೇಶನ ಭಜಿಪರನುದಿನ ಪರಮ ಭಕುತಿಯಲಿ  ||  ೧೦  ||

ಜ್ಯೋತಿಯೊಳಗಿಪ್ಪನು ಕಪಿಲ ಪುರು
ಹೂತ ಮುಖ ದಿಕ್ಪತಿಗಳಿಂದ ಸ
ಮೇತನಾಗಿಹ ದಕ್ಷಿಣಾಕ್ಷಿಯ ಮುಖದೊಳಿಹ ವಿಶ್ವ |
ಶ್ವೇತವರ್ಣ ಚತುರ್ಭುಜನು ಸಂ
ಪ್ರೀತಿಯಿಂದಲಿ ಸ್ಥೂಲವಿಷಯವ
ಚೇತನರಿಗುಂಡುಣಿಪ ಜಾಗ್ರತೆಯಿತ್ತು ನೃಗಜ್ಯಾಸ್ಯ  ||  ೧೧  ||

ನೆಲೆಸಿಹರು ದಿಗ್ದೇವತೆಗಳಿ
ಕ್ಕೆಲದಿ ಕರ್ಣಂಗಳಲಿ ತೀರ್ಥಂ
ಗಳಿಗೆ ಮಾನಿಗಳಾದ ಸುರನದಿಮುಖ್ಯ ವಿರ್ಜರರು |
ಬಲದ ಕಿವಿಯಲಿ ಇರುತಿಹರು ಬಾಂ
ಬೊಳೆಯ ಜನಕ ತ್ರಿವಿಕ್ರಮನು ನಿ
ರ್ಮಲಿನರನು ಮಾಡುವನು ಈ ಪರಿ ಛಿಂತಿಸುವ ಜನರ  ||  ೧೨  ||

ಚಿತ್ತಜೇಂದ್ರರು ಮನದೊಳಿಪ್ಪರು
ಕೃತ್ತಿವಾಸನು ಅಹಂಕಾರದಿ
ಚಿತ್ತಚೇತನಮಾನಿಗಳು ವಿಹಗೇಂದ್ರ ಫಣಿಪರೊಳು |
ನಿತ್ಯದಲಿ ನೆಲೆಗೊಂಡು ಹತ್ತೊಂ
ಭತ್ತು ಮೊಗ ತೈಜಸನು ಸ್ವಪ್ನಾ
ವಸ್ಥೆಯೈದಿಸಿ ಜೀವರನು ಪ್ರವಿವಿಕ್ತಭುಕುವೆನಿಪ  ||  ೧೩  ||

ಜ್ಞಾನಮಯ ತೈಜಸನು ಹೃದಯ
ಸ್ಥಾನವೈದಿಸಿ ಪ್ರಾಜ್ಞನೆಂಬಭಿ
ಧಾನದಿಂ ಕರೆಸುತ್ತ ಚಿತ್ಸುಖ ವ್ಯಕ್ತಿಯನ್ನು ಕೊಡುತ |
ಆನತೇಷ್ಟಪ್ರದನು ಅನುಸಂ
ಧಾನವೀಯದೆ ಸುಪ್ತಿಯೈದಿಸಿ
ತಾನೆ ಪುನರಪಿ ಸ್ವಪ್ನಜಾಗ್ರತೆಯೀವ ಚೇತನಕೆ  ||  ೧೪  ||

ನಾಲಿಗೆಯೊಳಿಹ ವರುಣ ಮತ್ಸ್ಯಣು
ನಾಲಿಗೆಯೊಳುಪೇಂದ್ರರಿಂದ್ರರು
ತಾಲುಪರ್ಜನ್ಯಾಖ್ಯಸೂರ್ಯನು ಅರ್ಧಗರ್ಭನಿಹ |
ಅಲಿಯೊಳು ವಾಮನ ಸುಭಾಮನ
ಫಾಲದೊಳು ಶಿವ ಕೇಶವನು ಸುಕ-
ಪೋಲದೊಳಗೆ ರತೀಶ ಕಾಮನು ಅಲ್ಲೆ ಪ್ರದ್ಯುಮ್ನ   || ೧೫  ||

ರೋಮಗಳಲಿ ವಸಂತ ತ್ರಿಕಕು
ದ್ಧಾಮ ಮುಖದೊಳಗಗ್ನಿ ಭಾರ್ಗವ
ತಾಮರಸಭವ ವಾಸುದೇವರು ಮಸ್ತಕದೊಳಿಹರು |
ಈ ಮನದೊಳಿಹ ವಿಷ್ಣು ಶಿಖದೊಳು
ಮಾಮಹೇಶ್ವರ ನಾರಸಿಂಹ
ಸ್ವಾಮಿ ತನ್ನನುದಿನದಿ ನೆನೆವರಪಮೃತ್ಯು ಪರಿಹರಿಪ  ||  ೧೬  ||

ಮೌಳಿಯಲ್ಲಿಹ ವಾಸುದೇವನು
ಏಳಧಿಕನವ ಜಾತಿರೂಪವ
ತಾಳಿ ಮುಖದೊಳು ನಯನ ಶ್ರವಣಾದ್ಯವಯವಗಳೊಳಗೆ |
ಆಳರಸು ತಾನಾಗಿ ಸತತ ಸು
ಲೀಲೆಗೈಯುತಲಿಪ್ಪ ಸುಖಮಯ
ಕೇಳಿ ಕೇಳಿಸಿ ನೋಡಿ ನೋಡಿಸಿ ನುಡಿದು ನುಡಿಸುವನು  ||  ೧೭  ||

ಎರಡಧಿಕ ಎಪ್ಪತ್ತೆನಿಪ ಸಾ
ವಿರದ ನಾಡಿಗೆ ಮುಖ್ಯವೇಕೋ
ತ್ತರಶತಗಳಲ್ಲಿಹವು ನೂರಾವೊಂದು ಮೂರ್ತಿಗಳು |
ಅರಿತು ದೇಹದ ಕಲಶನಾಮಕ
ಹರಿಗೆ ಕಳೆಗಳಿವೆಂದು ನೈರಂ
ತರದಿ ಪೂಜಿಸುತಿಹರು ಪರಮಾದರದಿ ಭೂಸುರರು  || ೧೮  ||

ಇದಕೆ ಕಾರಣವೆನಿಸುವುವು ಎರ
ಡಧಿಕದಶ ನಾಡಿಗಳೊಳಗೆ ಸುರ
ನದಿಯೆ ಮೊದಲಾದಮಲತೀರ್ಥಗಳಿಹವು ಕರಣದಲಿ |
ಪದುಮನಾಭನು ಕೇಶವಾದಿ
ದ್ವಿದಶರೂಪದಲಿಪ್ಪನಲ್ಲತಿ
ಮೃದುಳವಾದ ಸುಷುಮ್ನದೊಳಗೇಕಾತ್ಮನೆನಿಸುವನು  ||  ೧೯  ||

ಆಮ್ನಯ ಪ್ರತಿಪಾದ್ಯ ಶ್ರೀಪ್ರ
ದ್ಯುಮ್ಮದೇವನು ದೇಹದೊಳಗೆ ಸು
ಷುಕ್ನದೀಡಾ ಪಿಂಗಳದಿ ವಿಶ್ವಾದಿ ರೂಪದಲಿ |
ನಿರ್ಮಲಾತ್ಮನು ವಾಣಿ ವಾಯು ಛ
ತುರ್ಮುಖರೊಳಿದ್ದಖಿಳ ಜೀವರ
ಕರ್ಮಗುಣವನುಸರಿಸಿ ನಡೆವನು ವಿಶ್ವ ವ್ಯಾಪಕನು  ||  ೨೦  ||

ಅಬ್ದಯನ ಋತು ಮಾಸ ಪಕ್ಷ ಸ
ಶಬ್ದದಿಂದಲಿ ಕರೆಸುತಲಿ ನೀ
ಲಾಬ್ದ ವರ್ಣನಿರುದ್ಧ ಮೊದಲಾದೈದು ರೂಪದಲಿ |
ಹಬ್ಬಿಹನು ಸರ್ವತ್ರದಲಿ ಕರು
ಣಾಬ್ಧಿ ನಾಲ್ವತ್ತೈದು ರೂಪದಿ
ಲಭ್ಯನಾಗುವನೀ ಪರಿ ಧೇನಿಸುವ ಭಕುತರಿಗೆ  ||  ೨೧  ||

ಐದು ರೂಪಾತ್ಮಕನು ಇಪ್ಪ
ತ್ತೈದು ರೂಪದಲಿಪ್ಪ ಮತ್ತ್ ಹದಿ
ನೈದು ತಿಥಿ ಇಪ್ಪತ್ತನಾಲಕರಿಂದ ಪೆಚ್ಚಿಸಲು  |
ಐದುವುದು ಅರವತ್ತಧಿಕ ಅರ
ಯಿದು ದಿವಸಾಹ್ವಯನೊಳಗೆ ಮನ
ತೋಯ್ಧವಗೆ ತಾಪತ್ರಯದಿ ಮಹದೋಷವೆಲ್ಲಿಹವು  ||  ೨೨  ||

ದಿವಸ ಯಾಮ ಮುಹೂರ್ತ ಘಟಿಕಾ
ದ್ಯವಯವಗಳೊಳಗಿದ್ದು ಗಂಗಾ
ಪ್ರವಹದಂದದಿ ಕಾಲನಾಮಕ ಪ್ರವಹಿಸುತ್ತಲಿಪ್ಪ |
ಇವನ ಗುಣರೂಪ ಕ್ರಿಯಂಗಳ
ನಿವಹದೊಳು ಮುಳುಗಾಡುತಲಿ ಭಾ
ರ್ಗವಿ ಸದಾನಂದಾತ್ಮಳಾಗಿಹಳೆಲ್ಲ ಕಾಲದಲಿ  ||  ೨೩  ||

ವೇದತತಿಗಳ ಮಾನಿ ಲಕುಮಿ ಧ
ರಾಧರನ ಗುಣರೂಪಕ್ರಿಯೆಗಳ
ಆದಿ ಮಧ್ಯಾಂತವನು ಕಾಣದೆ ಮನದಿ ಯೋಚಿಸುತ |
ಆದಪೆನೆ ಈತನಿಗೆ ಪತ್ನಿ ಕೃ
ಪೋದಧಿಯು ಸ್ವೀಕರಿಸಿದನು ಲೋ
ಕಾಧಿಪನು ಭಿಕ್ಷುಕನ ಮನೆಯೌತಣವ ಕೊಂಬಂತೆ  ||  ೨೪  ||

ಕೋವಿದರು ಚಿತ್ತೈಸುವುದು ಶ್ರೀ
ದೇವಿಯೊಳಗಿಹ ನಿಖಿಳ ಗುಣ ತೃಣ
ಜೀವರಲಿ ಕಲ್ಪಿಸಿಯುಕುತಿಯಲಿ ಮತ್ತು ಕ್ರಮದಿಂದ |
ದೇವದೇವಕಿಯಿಪ್ಪಳೆಂದರಿ
ದಾ ವಿರಿಂಛನ ಜನನಿಯೀತನ
ನಾವ ಕಾಲದಲರಿಯಳೆಂತೆನೆ ನರರ ಪಾಡೇನು  ||  ೨೫  ||

ಕ್ಷೀರ ದಧಿ ನವನೀತ ಘೃತದೊಳು
ಸೌರಭರ ಸಾಹ್ವಯನೆನಿಸಿ ಶಾಂ
ತೀರಮಣ ಜ್ಞಾನಕ್ರಿಯೇಚ್ಛಾ ಶಕ್ತಿಯೆಂದೆಂಬ |
ಈರೆರಡು ನಾಮದಲಿ ಕರೆಸುವ
ಭಾರತೀ ವಾಗ್ದೇವಿ ವಾಯು ಸ
ರೋರುಹಾಸನರಲ್ಲಿ ನೆಲೆಸಿಹರೆಲ್ಲ ಕಾಲದಲಿ  ||  ೨೬  ||

ವಸುಗಳೆಂಟು ನವಪ್ರಜೇಶರು
ಶ್ವಸನಗಣವೈವತ್ತು ಏಕಾ
ದಶ ದಿವಾಕರರನಿತು ರುದ್ರರು ಅಶ್ವಿನಿಗಳೆರಡು |
ದಶವಿಹೀನ ಶತಾಖ್ಯ ಈ ಸುಮ
ನಸರೊಳಗೆ ಚತುರಾತ್ಮ ನೀಯಾ
ಮಿಸುವ ಬ್ರಹ್ಮ ಸಮೀರ ಖಗಪ ಫಣೀಂದ್ರರೊಳಗಿದ್ದು  ||  ೨೭  ||

ತೋರುತಿಪ್ಪನು ಚಕ್ರದಲಿ ಹಿಂ
ಕಾರನಾಮಕ ಶಂಖದಲಿ ಪ್ರತಿ
ಹಾರ ಗದೆಯಲಿ ನಿಧನ ಪದ್ಮದಲಿಪ್ಪ ಪ್ರಸ್ತಾವ |
ಕಾರಣಿಕನುದ್ಗೀಥನಾಮದಿ
ಮಾರಮಣನೈರೂಪಗಳ ಶಂ
ಖಾರಿ ಮೊದಲಾದಾಯುಧಗಳೊಳು ಸ್ಮರಿಸಿ ಧರಿಸುತಿರು  ||  ೨೮  ||

ತನುವೆ ರಥ ವಾಗಾಭಿಮಾನಿಯೆ
ಗುಣವೆನಿಸುವಳು ಶ್ರೋತ್ರದೊಳು ರೋ
ಹಿಣಿಶಶಾಂಕರು ಪಾಶಪಾಣಿಗಳಶ್ವವೆಂದೆನಿಸಿ |
ಇನನು ಸಂಜ್ಞಾದೇವಿಯರು ಇಹ
ರನಳಲೋಚನ ಸೂತನೆನಿಸುವ
ಪ್ರಣವ ಪಾದ್ಯ ಪ್ರಾಣನಾಮಕ ರಥಿಕನೆನಿಸುವನು  ||  ೨೯  ||

ಅಮಿತಮಹಿಮನಪಾರಗುಣಗಳ
ಸಮಿತ ವರ್ಣಾತ್ಮಕ ಶೃತಿ ಸ್ಮೃತಿ
ಗಮಿಸಲಾಪವೇ ತದಭಿಮಾನಿಗಳೆಂದೆನಿಸಿಕೊಂಬ |
ಕಮಲ ಸಂಭವ ಭವ ಸುರೇಂದ್ರಾ
ದ್ಯಮರರನುದಿನ ತಿಳಿಯಲರಿಯರು
ಸ್ವಮಹಿಮೆಗಳಾದ್ಯಂತಮಧ್ಯಗಳರಿವ ಸರ್ವಜ್ಞ  ||  ೩೦  ||

ವಿತ್ತದೇಹಾಗಾರದಾರಾ
ಪತ್ಯಮಿತ್ರಾದಿಗೊಳಗೆ ಹರಿ
ಪ್ರತ್ಯಗಾತ್ಮನು ಎಂದೆನಿಸಿ ನೆಲೆಸಿಪ್ಪನೆಂದರಿದು |
ನಿತ್ಯದಲಿ ಸಂತೃಪ್ತಿ ಪಡಿಸುತ
ಉತ್ತಮಾಧಮ ಮಧ್ಯಮರ ಕೃತ
ಕೃತ್ಯನಾಗುನ್ಮತ್ತನಾಗದೆ ಭೃತಯ ನಾನೆಂದು  ||  ೩೨  ||

ದೇವ ದೇವೇಶನ ಸುಮೂರ್ತಿ ಕ
ಳೇವರಗಳೊಳಗನವರತ ಸಂ
ಭಾವಿಸುತ ಪೂಜಿಸುತ ನೋಡುತ ಸುಖಿಸುತಿರು ಬಿಡದೆ |
ಶ್ರೀವರ ಜಗನ್ನಾಥ ವಿಠಲನು
ತಾ ಒಲಿದು ಕಾರುಣ್ಯದಲಿ ಭವ
ನೋವ ಪರಿಹರಿಸುವನು ಪ್ರವಿತತ ಪತಿತಪಾವನನು  ||  ೩೩  ||